ಅಶೋಕ ಹೆಗಡೆ ಅವರ ಕವಿತೆಗಳು

ಸಾವು ಅನಿರೀಕ್ಷಿತವಾಗಿರಲಿಲ್ಲ

ಸಾವೇನೂ ಅನಿರೀಕ್ಷಿತವಾಗಿರಲಿಲ್ಲ

ಕಾಯುತ್ತಿದ್ದೆವು ಹುಟ್ಟಿದ ದಿನದಿಂದಲೆ

ಅರ್ಧ ಕೆಂಪಿನ ಸ್ವೆಟರ ತೊಡಿಸಿ

ತೊಟ್ಟಿಲಿಗೆ ಕಟ್ಟಿ ಹತ್ತು ತಲೆಯ ರಾಕ್ಷಸರ

ಕಾಡಿಗೆ ತೀಡಿ ಕಣ್ಣಿಗೆ

ತೂಗಿ ಜೋಕಾಲಿ ಹೆದರಿದ ಮಗುವನ್ನು

ಹಾರಿಸಿ ಮಾರುದ್ದ

ಆಜ್ನೆ ಇತ್ತೆವು ಸಾವನ್ನು ಗೆಲ್ಲು ಎಂದು

ಸಾವೇನೂ ನಮಗೆ ಅನಿರೀಕ್ಷಿತವಾಗಿರಲಿಲ್ಲ

ಬಿಳಿಯ ಯುನಿಫಾರ್ಮ ಹಾಕಲೊಲ್ಲದ ಹುಡುಗನ

ಎಷ್ಟು ಚಾಕ ಚಕ್ಯತೆಯಿಂದ ಒಪ್ಪಿಸಿದೆವು.

ಶಾಲೆಯ ಗೇಟಿನ ಹಿಂದೆ

ಅಳುತ್ತ ನಿಂತವನ ಕೈಕೊಸರಿ ಅವನ ಒಳ್ಳೆಯದಕ್ಕೆಂದು

ಬೆನ್ನುಹಾಕಿ ನಡೆದೆವು ಜಗದ ಗದ್ದಲಗಳೊಳಗೆ ಅವನ ನೂಕಿ

ರಾತ್ರಿ ಇಡಿ ಶಾಲೆಯ ಹೆದರಿಕೆಯಲ್ಲಿ

ಅತ್ತವನ ಕೈಹಿಡಿದು ಸಾಂತ್ವನಿಸಿದೆವು ಸ್ವಲ್ಪ

ಏರು ದನಿಯಲ್ಲೇ ಗದರಿಸಿ ಬಾಯಿ ಮುಚ್ಚಿಸಿದೆವು.

ರಾತ್ರಿ ನಿದ್ದೆಯಲ್ಲೆ ಬೆಚ್ಚುವವನ ಅಪ್ಪಿ ಸಂತೈಸಲು

ಯಾಕೋ ಹೆದರಿದೆವು.

ಯಾರೊ ಹೇಳಿದರೆಂದು ಭಟ್ಟರ ಕರೆಸಿ ಯಜ್ನಮಾಡಿಸಿ

ಹೊಗೆತುಂಬಿ ಕಣ್ಣೊಳಗೆ ಕಣ್ಣೀರಿಟ್ಟವನ

ಬಗ್ಗಿಸಿ ಬಗ್ಗಿಸಿ ಧಣಿಸಿದೆವು. ಮುಂದೆ ಎಲ್ಲಾ ಸುಸೂತ್ರ

ಇಟ್ಟ ಸಾವಿನ ಬೀಜಕ್ಕೆ ಮತ್ತೊಂದಿಷ್ಟು ನೀರು ಜೋರಾಗಿಯೇ ಸುರಿದೆವು

ಮುಂದೊಂದು ದಿನ ಪಕ್ಕದಮನೆಯ ಹುಡುಗನ ಜೊತೆ

ಇವನ ಚಕ್ಕಂದ ಯಾರೊ ಹೇಳಿದ್ದಕ್ಕೆ ಮನೆಯಿಂದ ಹೊರ

ಹಾಕುವ ಬೆದರಿಕೆ ಒಡ್ಡಿ ಸರಿದಾರಿಗೆ ತಂದೆವು.

ಅಂದೇ ತಾನು ಸಾಯುವನೆಂದು ಅತ್ತರೆ

ಮುಂದೊಂದು ದಿನ ಅದಕ್ಕೆ ಸಮಯವಿದೆಯಂದು ಗಹಗಹಿಸಿ ನಕ್ಕೆವು.

ಸಾವೇನು ಅನಿರೀಕ್ಷಿತವಾಗಿರಲಿಲ್ಲ

ದೊಡ್ಡ ಕಂಪನಿಯ ದೊಡ್ಡ ಬಾಗಿಲಿಗೆ

ಕಾರಿನಲ್ಲಿಯೆ ಬಿಟ್ಟು ಬಂದೆವು. ಒಳ ಹೋಗಲು ಹೆದರಿದವನ

ಬೆನ್ನು ಒತ್ತಿ ಟೈ ನಿನಗೆ ಎಷ್ಟು ಚನ್ನಾಗಿ ಕಾಣುತ್ತದೆಯೆಂದು

ಹುಸಿ ನಕ್ಕೆವು. ರಾತ್ರಿ ರೂಂನಲ್ಲಿ ಒಬ್ಬನೇ ಅಳುವವನ

ಹತ್ತಿರವೂ ಹೋಗದೆ ಊಟಮಾಡಿ ಎಲ್ಲ ಸರಿ ಹೋಗುತ್ತದೆಯೆಂದು

ತಣ್ಣಗೆ ಮಲಗಿದೆವು

ಮುಂದೆ ಜಾತಿ ನೋಡಿ, ಜಾತಕ ತರಿಸಿ

ಹೊಡೆಸೇ ಬಿಟ್ಟೆವು ಡೊಳ್ಳು ನಗಾರಿ.

ಮೌನವಾಗಿ ಕೋಣೆಯ ಕದಮುಚ್ಚಿದವನ ಮುಖದಲ್ಲಿ

ನಗೆಯ ಕಾಣದೆ ದಿಗಿಲಾದರೂ

ಎಂತ ಚಂದದ ಹುಡುಗಿ, ಎಲ್ಲ ಸರಿಮಾಡಿಕೊಳ್ಳುತ್ತಾಳೆಂದು

ಅಂದುಕೊಂಡೆವು. ಬೆಳಗ್ಗೆ ಎದ್ದಾಗ ಎಲ್ಲಾ ಹಾಹಾಕಾರ

ಪ್ಯಾನಿನಲ್ಲಿ ಜೋತಾಡುವ ಅವನ ಮುದ್ದುಕಾಲುಗಳಕೆಳಗೆ

ಅವನದೇ ಮುದ್ದಿನ ಅಕ್ಷರ ‘ನನ್ನಿಂದ ಆಗಲ್ಲಮ್ಮ’

ಅವಳ ಸಾವೇನು ನಮಗೆ ಅನಿರೀಕ್ಷಿತವಾಗಿರಲಿಲ್ಲ

**

ಐಟಿ ಬಿಟಿಯಲ್ಲಿ

ಅಜ್ಜನ ಶ್ರಾದ್ದ ಅಪ್ಪನ ತಿಥಿ

ಕಂಪ್ಯೂಟರಲ್ಲೆ ಮಾಡಿ,

ಮಕ್ಕಳಹುಟ್ಟು ಪತ್ನಿಯ ಮುಟ್ಟು

ಕಂಪ್ಯುಟರಲ್ಲೆ ಮುಗಿಸಿ

ಖಾಲಿ ಅನಿಸಿದರೆ ವಾಟ್ಸಪ್ ನಲ್ಲೆ

ತಲಾಕ ಸೋಡಾಚೀಟಿ

ಐಟಿ ಬಿಟಿಯಲ್ಲಿ ಎಲ್ಲಾ ಮಜ ಮಜಬೂತು ಕಣ್ರಿ

ಏಕಾಧಿಪತಿಯ ಚಕ್ರಾದಿಪತ್ಯ

ಪ್ರಜೆಗಳೂ ಕೂಡಾ ವರ್ಚುವಲ್

ಮಾತೇ ಇಲ್ಲದ ಮೌನದ ರಾಜ್ಯ

ಸತ್ತರೆ ಸುಡಲು ಯಾರುಂಟು.

ಹುಟ್ಟಿಸಿದ್ದಕ್ಕೆ ಹಡೆಸಲುಬೇಕು

ಸುತ್ತುವ ಬದುಕಿನ ಚಕ್ರ

ಸತ್ತರೂ ಇಲ್ಲ ಜಾತ್ರೆಯ ಗದ್ದಲ

ಅರ್ಧ ಜೀವಿಗಳ ಸಾಮ್ರಾಜ್ಯ

ಐಟಿ ಬಿಟಿಯಲ್ಲಿ ಎಲ್ಲಾ ಮಜ ಮಜಬೂತು ಕಣ್ರಿ

ಕೈಯನು ಮುಟ್ಟದೆ ಮೈಯನು ತಟ್ಟದೆ

ಖಾಲಿ ಪರದೆಯ ವಿಶ್ರಾಂತಿ

ರಾತ್ರಿಯೋ ಹಗಲೊ ತಿಳಿಯದ ರೂಂನಲಿ

ಯಾರೋ ಕರೆದರೆ ದಿಗ್ಬ್ರಾಂತಿ.

ದೇಶ ದೇಶಗಳ ಓಡಾಡಿದೆ ಕಾಲು,

ಕಾಲುದಾರಿಗಳು ಎಲ್ಲೆಲ್ಲಿ

ಜಾಗರಗಳಲ್ಲಿ ಕಳೆಯಿತು ಲೆಕ್ಕ ಎತ್ತಿ ಹಿಡಿವುದೆ ರೊಕ್ಕ

ಲೆಕ್ಕ ತಪ್ಪಿದ ಬದುಕಿನಲಿ

ಐಟಿ ಬಿಟಿಯಲ್ಲಿ ಎಲ್ಲಾ ಮಜ ಮಜಬೂತು ಕಣ್ರಿ

**

ಏನು ಇಲ್ಲವೆನಬೇಡಿ ಈ ಪತ್ರದಲ್ಲಿ

ಉದ್ದ ಕಾನುನಿನ ಸರಹದ್ದಿನ

ಪತ್ರದ ಒಕ್ಕಣಿಕೆಯಲ್ಲಿ ಎಷ್ಟು ಗಟ್ಟಿ ಅಕ್ಷರಗಳು

ಸನ್ 2016 ರಲ್ಲಿ ನಾನೇ ನನ್ನ ಮನಸ್ಸಿಗನುಗುಣವಾಗಿ

ಬರೆದಿದ್ದೇನೆ ಎನ್ನುವ ಆ ವಿಲ್ ನ ಕೊನೆಯ ಸಾಲಿನವರೆಗೂ

ಎಷ್ಟೆಲ್ಲಾ ಬಾರಿ ತಿದ್ದಲಾಗಿದೆ.

ಕೈ ಹಿಡಿದು ಕೊನೆಯವರೆಗೂ

ಸಹಿಸಿಕೊಂಡ ನಿನಗೆ ಇಷ್ಟಿಷ್ಟು ಲೆಕ್ಕ

ಮನೆ ಕಾರು ಬ್ಯಾಂಕಿನ ವಹಿವಾಟು.

ಹುಟ್ಟಿ ಹರುಷ ಹೆಚ್ಚಿಸಿದ ಮಗನೇ

ನಿನ್ನ ಮೇಲಿನ ಸಿಟ್ಟಿಗೆ ಬರೆಯುತ್ತಿದ್ದೇನೆ

ತಗೋ ಎರಡು ಕಿಲುಬು ಕಾಸು

ಏನು ಇಲ್ಲವೆನಬೇಡಿ ಈ ಪತ್ರದಲ್ಲಿ

ಸಾಯುವ ನಾನು ನನ್ನ ಕೊನೆಯ ಇಚ್ಛೆ

ಹೇಳಿಯೇ ಬಿಡುತ್ತೇನೆ ಯಾರಿಗೂ ಹೆದರದೆ

ಮಾತೇ ಇಲ್ಲದೆ ಒಪ್ಪಿಕೊಂಡಳಲ್ಲ ಅವಳಿಗೆ ನನ್ನ ಅರ್ಧ ಸಂಪತ್ತು

ಮತ್ತು ಒಂದು ದಿನವೂ ಹೇಸಿಕೊಳ್ಳದೆ ತೊಳೆದಳಲ್ಲ ಮೈ

ಆಸ್ಪತ್ರೆಯ ದಿನಗಳ ದಿವ್ಯಸ್ವರೂಪಳೆ

ನಿನಗೂ ಇದೆ ಹಕ್ಕು ಮತ್ತೊಂದಿಷ್ಟು.

ಅರ್ದದಾರಿಯಲ್ಲಿಯೆ ನಿನ್ನ ದೋಚಿದೆನಲ್ಲ ಮರೆತುಹೊದ ಬಡಸ್ನೆಹಿತನೆ

ನನ್ನ ತಪ್ಪನ್ನು ಮುನ್ನಿಸು ನಿನ್ನಿಂದ ಪಡೆದುದನ್ನ

ಇಲ್ಲಿಯೂ ಸರಿದೊಗಿಸಲು ಆಗಲಿಲ್ಲ

ಸಾದ್ಯವಾದರೆ ಕ್ಷಮಿಸು.

ಮತ್ತೆ ನನ್ನ ಕಷ್ಟದ ದಿನಕ್ಕೆ ಒದಗಿ ಬಂದಿರಲ್ಲ ನೀವು ಸ್ನೇಹಿತರು

ಒಪ್ಪಿಕೊಳ್ಳಿ ನನ್ನ ಸಾಷ್ಟಾಂಗ ನಮಸ್ಕಾರಗಳನ್ನು

ಏನು ಇಲ್ಲವೆನಬೇಡಿ ಈ ಪತ್ರದಲ್ಲಿ

ಬರೆವ ಕೈಯಗಳು ತಡವರಿಸಿದವೇ ಲೆಕ್ಕಕ್ಕೆ ಸಿಗದ

ಭಾವನೆಗಳ ಬರಪೂರತೆಗೆ, ಧಿಕ್ಕರಿಸಿ ಸೀಮೋಲ್ಲಂಘನಕ್ಕೆ

ಇಳಿದವೆ ಅಕ್ಷರಗಳು ಉದ್ದಪತ್ರದ ಚೌಕಟ್ಟನ್ನು ಮೀರಿ

ಅನುದಿನದ ಅಸಂಗತಗಳನ್ನೆಲ್ಲ ಹೊರ ದಬ್ಬಿದವೆ

ಶಬ್ದಾತೀತಯಲ್ಲಿ ತೆರೆದುಕೊಂಡ ಅವನ ಖಾಸಾ ಪ್ರಪಂಚ

ಇಹವನ್ನು ನಿರ್ಧರಿಸುವ ಒಂದು ಸಾದಾ ಹಾಳೆಯ ಮೇಲೆ

ಏನು ಇಲ್ಲವೆನಬೇಡಿ ಈ ಪತ್ರದಲ್ಲಿ - ಏನು ಇಲ್ಲದಿದ್ದರೆ

ನಡುಗಬೇಕಿತ್ತು ಯಾಕೆ ಪತ್ರಒಡೆಯುವ ಮುನ್ನ

ಪ್ರಪಂಚದ ಮಂದಿ ಕಣ್ಣಿಗೆ ದಕ್ಕದ, ಭಾವಕ್ಕೆ ನಿಲುಕದ

ಒಂದು ಮೌನದಲ್ಲಿ

**