ಕೆ.ಪಿ. ಮೃತ್ಯುಂಜಯರವರ ಕವಿತೆಗಳು

ನನ್ನ ಶಬ್ದ ನಿನ್ನಲಿ ಬಂದು

ನನ್ನ ಶಬ್ದವೊಂದು ನಿನ್ನಲಿ ಬಂದು ಏನಾಯಿತು ಹೇಳು?

ಹೂವಿನಂಥ ಮನಸು ಹಾಳಾಯಿತೆ;

ಗೀಳಿಬಿಟ್ಟಿತೆ ಹೇಳು

ದಳಗಳನು.

ನಿನ್ನ ಮೌನ ಸುಡುತಿದೆ ನನ್ನ. ಕೇಳು

ಒಂದಾದರೂ ಪ್ರಶ್ನೆ:

ಯಾಕೆ ಕಳಿಸಿದೆ ಅದನು

ಹೃದಯದ ಬಳಿಗೆ?

ಆಯುಷ್ಯವೇ ತೀರಿ ಹೋದಂತೆ

ನಿನ್ನನ್ನು ಪಡೆಯದಿದ್ದರೆ

ಹಠ ಹಿಡಿಯಿತು ಹೃದಯ.

ಅಲ್ಲಿಂದಲೆ ಅದು ಬಂದುದು ನೋಡು.

ಎದೆ ಕದವ ಮುಚ್ಚಿ ಬೀಗ ಜಡಿದರೂ

ಫಟಿಂಗ ಕೈದಿಯಂತೆ

ಎಗರಿ ಹೋಯಿತು-

ಅದು ನನ್ನ ಜೀವ.

ಚೊಕ್ಕ ಚಿನ್ನ; ಉಣ್ಣುವ ಅನ್ನ; ಕಣ್ಣ ಬಣ್ಣ ಏನೆಲ್ಲ.

ಅಲ್ಲಲ್ಲದೇ ಇನ್ನೆಲ್ಲೂ ತಂಗೆನು-ನದಿ

ತುಂಗೆಯಂಥವಳು ಎಂದೆಲ್ಲ ಚಂಡಿ

ಹಿಡಿಯಿತು ಕೇಳು!

ಕಂಗೆಡಿಸಿತೆ, ಮನವ ಗೀರಿತೆ ಹೇಳು.

ಜಂಘಾಬಲ ಉಡುಗುತಿದೆ;

ಒಣಗುತಿದೆ ಬಾಯಿ-

ನಿನ್ನಲ್ಲೆ ಆ ಶಬುದ ಹಿಂಗಿ.

***

ಗಾಳಿ ಎಲ್ಲರ ಶಬುದ ಇಟುಕೊಂಡು

ಗಾಳಿ ಎಲ್ಲರ ಶಬುದ

ಇಟುಕೊಂಡು

ನೀರು ಎಲ್ಲರ ಉಗುಳು

ಉಟುಕೊಂಡು

ಬೆಳಕು ಎಲ್ಲರ ಕತ್ತಲು

ತೊಟುಕೊಂಡು

ಪಡುವಣಕೆ ದಿಕ್ಕಾಪಾಲಾಗುತ

-ಎಲ್ಲಿ ಸೂರ್ಯದೇವನು ನಾಪತ್ತೆ

ಯಾಗುವಲ್ಲಿ

ತಳವೂರತ

ನರಮಾನವರ ಹುಲುಬುದ್ಧಿಯ ನೆನೆಯುತ……

ಅಯ್ಯೋ! ಅದ ನಾವು ತಾನೆ

ಅವುಗಳಲಿ

ಬೆಳೆದದ್ದು ಎನುತ

ನಿಟ್ಟುಸರನು ಬಿಡುತ

ಅಕ್ಕರದಿ ಅದ ಬರೆದುಬಿಡುವುದೆಂದೆನಿಸಿ

ಬೇಡವೆಂದು ಅದ

ತಮ ತಮ್ಮೊಳಗೆ ತಾವೇ

ಅಂದುಕೊಳುತ

ಅದ ಹಂಗೇ ಬೆಳೆಸುತ

ಬೆಳೆಸುತ ಅನಕ್ಕರದ ಕಂದಮ್ಮಗಳ

ಎದೆಗೂಡಲಿ

ಉಳಿಸುತ

ಅಲ್ಲಿ ನಾನಾ ಹಾಡುಗಳಾಗಿ ಹುಟ್ಟಿ

ಮತ್ತು ಕವಲಾಗಿ

ಕಣ್ಣುರೆಪ್ಪೆಗಳಾಗಿ

ಕಣ್ಣುಳ್ಳವರ ಕಣ್ಣುಗಳ

ಕಾಪಾಡುತ

ಇರಲಾಗಿ

ಇರುವ ಲೋಕದ

ಲೋಕವ ನಿದ್ರೆಗೆ ದೂಡುತ

ಬುವಿ ಸೊರಗುತ

ಆಕಾಶ ಆಯಾಸಗೊಳುತ

ಇರುವ ಜಾಗದಲೆ ಇರುವುವು

ಕಣ್ಣಕೊನೆಯಲಿ ಹನಿಯ ತೊಟ್ಟುಕೊಂಡು.

***

ಅವರವರ ಸಾವು

ಅವರವರ ಪಾಲಿನ ನಿದ್ದೆಯಂತೆ

ಅವರವರ ಸಾವು.

ನಿದ್ದೆ ಪಾಲು ಮಾಡುವ ಮುಖಾರವಿಂದಗಳ ಪ್ರೇಮ:

ಖಳ ಕಣ್ಣುಗಳ

ಕ್ರೌರ್ಯದಲಿ ಸಾವು ಹಂಚಿ ಹೋಗಿದೆ.

ಆಕಾಶದಡ್ಡಗಲ ಹರಡಿಕೊಂಡ ಮಳೆ ಮರ

ದ ಮೇಲೆ ಬಣ್ಣ ಹೂಗಳ ಪಕಳೆ

ಫಳಫಳ

ತಂದೆಯ ಕೊನೆಯುಸುರಿನ ಅಲೆ ಅಲೆ.

ತಿರುಚಿ ಮಡಗಿದ ನಿದ್ದೆಯ

ಕೊಂಬು ಕಹಳೆ

ಊದುತ್ತದೆ-

‘ಉಸುರೇ ಉಸುರೇ.....!’

‘ರುದ್ರ ಭೂಮಿಯಿಂದ ಬಂದ ವರ್ತಮಾನವೇ ಹೇಳು-

ನಮ್ಮ ನಮ್ಮ ತನುಗಳು

ಎಲ್ಲಿ ತಂಗುವುವು’

ಆಕಾಶ ಕಿತ್ತೆಸೆದ ನಕ್ಷತ್ರಗಳು ಹೂಮಳೆಯಾಗುವುವು

ಎಂದು ಕುರುಳು ಬಿಚ್ಚಿದ ಕೋಮಲೆಯರ ಸ್ವರವೂ

ಇಲ್ಲೇ ಹರಿದಾಡುವುವು.

ಶುಭ್ರ ವದನದಲಿ

ಗೆರೆ ಮೂಡುವುವು

ಆಕಾಶ ಪರದೆಯ ಕೊರೆದು

ಇಳಿದಂಥ ಮಳೆಯಾಗಿ

ಸರಸರ-

ಮರೆವು.

ಸರಭರ ಮಹಾಪೂರ ಎಲ್ಲಾದರೂ

ಬರಿದಾಗುವಂತೆ

ಬರಿದಾಗುವುದೇ ಚೆಲುವು.

ಬರಿದಾದರೆ ತಾನೆ

ಚೆಲುವು?

‘ಬರಿದಾಗುವುದಕೆ ತಾನೇ

ನೀನು ಚೆಲುವೆ?

ಮಳೆಗೆ ಉಕ್ಕಿದ

ನೆಲವೆ’

ನಿದ್ದೆಯುತ್ತುಂಗದಲ್ಲಿ ನಿಂತು ಹೋಗುವ

ಉಸುರೆ

ಓ ಪ್ರಾಣದುಸುರೇ,

ಆಗ ನಿನ್ನೊಂದು ಕಾಲು

ಬಾನು ; ಇನ್ನೊಂದು ಭೂತಳ

ಮಧ್ಯದವಕಾಶದಲಿ ಸಣ್ಣ ಚೀರು.

***

ಹೊಚ್ಚ ಹೊಸ ಹೂಗಳು

ಹೊಚ್ಚ ಹೊಸ ಹೂಗಳು!

ಪವಿತ್ರ ಪದತಲವನ್ನು ತುಂಬಿಕೊಂಡಿವೆ.

ದಿನಾಲೂ ನಾನು ಬೆಳಗಾಗುವುದನ್ನೇ ಕಾಯುತ್ತೇನೆ

ಕಣ್ಪಿಸುರನ್ನು ತೆಗೆದೇ ಇರೋಲ್ಲ ಕೆಲವೊಮ್ಮೆ.

ಈಗಲೋ ಇಬ್ಬನಿಯ ಕಾಲ-ಕಾಲುಗಳ ಮಂಡಿವರೆಗೆ

ಒದ್ದೆ. ಹೊಲದೊಳಗೆ ಹಾಯ್ದು ನಿನ್ನ ತಲುಪಬೇಕು.

ಪವಿತ್ರ ಗುಡ್ಡೆಯ ತಲುಪವಷ್ಟ ರಲಿ ಕನಿಷ್ಠ ಮೂರು ಸಾರಿ

ನಮಸ್ಕರಿಸುತ್ತೇನೆ ಸೂರ್ಯನಿಗೆ; ನಮಸ್ಕರಿಸುತ್ತೇನೆ ಸೂರ್ಯನಂಥ

ತಂದೆಗೆ. ತೆಂಗಿನ ರೂಪದಲ್ಲಿ ನಿಂತಿರುವ ಪ್ರೀತಿಯ ತಂದೆಯ

ಬೆರಳಿನಂತಿರುವ ಗರಿಗಳನ್ನು ಮೆಲ್ಲನೆ ಮುಟ್ಟುತ್ತೇನೆ;

ಮುತ್ತಿಡುತ್ತೇನೆ. ಹೊಲದ ಮಧ್ಯೆ ತಂದೆಯೇ,

ನೀನು ಮಲಗಿರುವೆ- ಚಿರಂತನ ನಿದ್ದೆಯಲ್ಲಿ. ನಿಶಬ್ದದಿ

ನಿಂತು ಪ್ರಾರ್ಥಿಸುತ್ತೇನೆ ಉದ್ಧರಿಸಲು; ಪ್ರಾರ್ಥಿಸುತ್ತೇನೆ

ತಪ್ಪುಗಳ ಕ್ಷಮಿಸಲು.

ಆಮೇಲೆ, ನಾನು ಎಷ್ಟು ತಿಳಿಯಾಗುತ್ತೇನೆಂದರೆ-

ನನ್ನ ತಳದಲ್ಲಿ ರಾತ್ರಿಯ ಚಂದ್ರ ಕಾಣುತ್ತಾನೆ!

****

ತೋಪಿನೊಳಗಿನ ಕೂಗು

ಬೇಸಿಗೆ:

ಮನದ ತೋಪಿನೊಳಗೆ

ಕೆಲ ಮರದೆಲೆಗಳು ಉದುರುತ್ತಿವೆ.

ಎಲೆ ಮರೆಯಲಿ ಕೋಗಿಲೆ ಕೂಗು:

ಆ ಹಾಡು

ಬಿದ್ದು ಹೋದ

ಹಳೆ ಮನೆಯೊಳಗಿದ್ದ ಮಾರ್ದವ ಚಣ

ಗಳನು;

ಸಾವು ನೆಲೆಯೂರಿದ್ದನ್ನು

ಕಟ್ಟಿಕೊಡುತ್ತಿದೆ.

ದುಃಖದ ಹಾದಿಯಲ್ಲಿ ನಡುಗಾಲದಲ್ಲೇ

ಅತ್ತ ಹೋದವರನ್ನು

ತಿರುಗಿ ಬಿನ್ನಿ ಎಂದು ಕರೆಯುತ್ತಿದೆ.

ಲಿಂಗಾಚಾರ್ಯರು, ತಾಂಡವ,

ಮುದ್ದುಲಿಂಗ, ಗದ್ದಣ್ಣ, ಪುಟ್ಟಬಸವ,

ಚನ್ನಬಸವ ಆಚಾರ್ಯರೆಲ್ಲರೂ ಆ ಕರೆಗೆ

ಓಗೂಡುತಿರುವರು

ಎಂದು ಮರಗಳೆಲ್ಲವೂ ಮೈಕೊಡವುತಿವೆ.

ಆಚಾರ್ಯಗಣಂಗಳು ತಿರುಗಿ ಹೋಗುತ್ತಿರುವಾಗ

ನಾವೇನು ಮಾಡಿದ್ದೆವು

ಎಂದು ಸುತ್ತಿಗೆ ತಂಡಸ ಅಗ್ಗಿಷ್ಟಿಕೆ

ಅದ್ದುಗಣೆ ಇಕ್ಕಳ ಊದುಗೊಳವೆ

ಏನೆಲ್ಲ ಪಡಿ ಪದಾರ್ಥಗಳು

ಕಾಳಮ್ಮನವರ ಫೋಟೋಕ್ಕೆ

ವಂದಿಸಿ

ಜತೆಗೇ ಬರತೊಡಗಿದಾಗ

ಸಾಕ್ಷಾತ್ತು ವಸಂತಋತು

ಅಲ್ಲಿ ಇಲ್ಲಿ ಎಲ್ಲಕಡೆ.

ಜಾತಿ ನಲುಗಿಸಿದ ಮನಸುಗಳು

ಹಸಿವು ಬೇಯಿಸಿದ ದೇಹಗಳು

ಸಾವು ತಿಂದುಂಡ ಆತ್ಮಗಳಾದ

ಮೇಲ್ಕಂಡ ಪೂರ್ವಿಕರು

ತಲೆಬಾಗಿಲಿಗೆ ತಳಿರು ಕಟ್ಟಿ ಹಳೆಮನೆಯಲ್ಲಿ

ಉಗಾದಿ ಆಚರಿಸುವರು.

ಹೊತ್ತು ಮುಣುಗುವ ಹೊತ್ತಿಗೆ ಸರಿಯಾಗಿ

ಪ್ರತಿವರ್ಷದಂತೆ ಚೋಟೆಸಾಬರು

ಒಬ್ಬಟ್ಟಿನೂಟಕ್ಕೆ ಬಂದು ಕೂರುವರು.

-ಅಂಥ ಒಂದು ಕನಸು.

***

ತುಂಬೆ

ಸೋತ ಕೈಗಳಲಿ ದಿಕ್ಕುಗಳ ಮುಟ್ಟು;

ಹಳೆನಾಣ್ಯಗಳ

ಮೇಲೆ ದೀಪವಾರಿದ ಕಣ್ಣುಗಳ ನೆಟ್ಟು,

ನೆನಸು-ದಿನಮಾನಗಳ ಉಸಿರು,

ತವರು.

ತಿರುಗುವ ತಲೆಯೊಳಗೆ ನೂರೆಂಟು ದೈವಗಳು

ತಮ್ಮುಳಿವಿಗೇ ಪ್ರಾರ್ಥಿಸುತ್ತಿರೆ,

ಸಾಸಿವೆ ಸಿಕ್ಕದ ಮನೆಗಳಲಿ ಬರಿ ತುಂಬೆ

ಸಿಕ್ಕಿ, ತಲೆಗೋರಿ ಮೇಲೆ

ಆದ ಬೆಳೆಯಬಿಟ್ಟು…..

ಎಲ್ಲ ಹಗಲು ರಾತ್ರೆಗಳು ಒಂದೇ

ಆಗಿ ಬಿಡುವ ಗಳಿಗೆಯಲಿ

ಒಂದು ಬಿಸಿಲನು

ಒಂದು ಬೆಳುದಿಂಗಳನು

ಹೂವುಗಳಂತೆ ಎತ್ತಿ ತುಂಬೆ ಬುಟ್ಟಿಯಲಿ

ಆಡಲು ಬಿಟ್ಟು…….

ಕಂಗೆಡಿಸಿದ ರೂಹುಗಳನು ಕರೆ!

ಎದೆಬಿರಿಸಿದ ದನಿಗಳನು ಕರೆ!

ಗಾಯಗೊಳಿಸಿದ ಉಗುರು, ಉಸಿರು

ಮತ್ತು ನೆತ್ತರನು ಕರೆ!!

ಎಲ್ಲವಳಿದ ಮೇಲೆ ಅಳಿಲಿಗೆಲ್ಲಿ ಚಿಣ್ಣಾಟವೆನ್ನದೆ

ಅಲೆಗಳು ಮುಗಿದು ಸಮುದ್ರದುಯ್ಯಾಲೆ ಎತ್ತಣಕ್ಕೆನ್ನದೆ

ಅಳಿವನು ಹಿಡಿಯಲು ಬನ್ನಿರಿ

ಅಳಿದು

ಹೋದವರೇ, ಹಿಂತಿರುಗಿರಿ.

***