ರೂಪಾ ಹಾಸನ ಅವರ ಕವಿತೆಗಳು

ಬೈರಾಗಿಯ ಜಡೆ

1

ಹೊತ್ತು ಕಂತುವ ಮೊದಲೇ

ನಿನಗೆ ಜಡೆ ಹೆಣೆದು

ಮುಗಿಸಲೇಬೇಕೆಂಬುದಿವರ

ಉಗ್ರ ಆದೇಶ.

ನೀನೋ ಅಂಡಲೆವ ಬೈರಾಗಿ!

ನಿಂತಲ್ಲಿ ನಿಲ್ಲುವವನಲ್ಲ

ಕೂತಲ್ಲಿ ಕೂರುವವನಲ್ಲ

ಕ್ಷಣಕ್ಕೊಮ್ಮೆ ಧಿಗ್ಗನೆದ್ದು

ಗರಗರ ದಿಕ್ಕು ತಪ್ಪಿ ತಿರುಗುವ

ವಾಚಾಳಿ ಪಾದದವನು!

ನನ್ನ ಯಾವ ಮಿಕ್ಕುಳಿದ ಋಣವೋ

ನನಗೆ ಮೆಟ್ಟಿದ ಪ್ರಿಯ ಪಿಶಾಚಿ ನೀನು!

2

ಪುಸಲಾಯಿಸಿ ಗೋಗರೆದು

‘ಬಾರಪ್ಪ ಬಾ ಜಾಣ

ಸುಮ್ಮನೆ ಕೂರೋ ನನ ದೇವಾ

ದಮ್ಮಯ್ಯ ಅತ್ತಿತ್ತ ಅಲುಗಬೇಡ’

ಕಾಡಿಬೇಡಿ ಎಳೆ ತಂದು

ಕುಕ್ಕರ ಬಡಿಸಿದರೂ

ಕತ್ತು ಆಕಾಶಕ್ಕೊಮ್ಮೆ

ಇನ್ನೊಮ್ಮೆ ಭೂಮಿಗೆ

ನನ್ನ ಸಹನೆ ಬೆಂಕಿಗೆ!

ಅದೆಷ್ಟೋ ಕಾಲದಿಂದ

ಎಣ್ಣೆ ಬಾಚಣಿಗೆ ಸೋಕದೇಸೊಕ್ಕಿ

ಜಡೆಗಟ್ಟಿದ ನಿನ್ನ ಕೂದಲೋ

ದಂಡಕಾರಣ್ಯ

ಎಲ್ಲಿ ಹೊಕ್ಕು ಹೇಗೆ ಬಿಡಿಸುವುದೋ

ಪರಮ ಸಿಕ್ಕು.

3

ಇವರದೋ ಒಂದೇ ಆಗ್ರಹ

ಹೊತ್ತು ಮುಳುಗುತ್ತಿದೆ

ಬೇಗ ಮುಗಿಸು

ಬೇಗ ಮುಗಿಸು.

ಅದೇನು ಅಂತಿಂಥಾ ಜಡೆಯೇ

ಹೆಣೆದು ಬಿಸಾಡಲು?

ಹೆಣೆಯ ಬೇಕೀಗ

ಸಹಸ್ರ ಕಾಲಿನ ಜಡೆಯೇ

ಸಹಸ್ರ ನಡೆಯ ಪಾದದೆಜಮಾನನಿಗೆ!

ತಲೆ ಅಲುಗಿಸದೇ

ಸುಮ್ಮನೆ ಕೂರೋ ಮಹಾರಾಯ

ಈಗಿನ್ನೂ ಪುಂಡ ಕೂದಲಿಗೆ

ಎಣ್ಣೆ ಮಿದಿಯುತ್ತಿದ್ದೇನೆ.

ಉಂಡೆಗಟ್ಟಿದ ಸುರುಳಿ

ಗುಂಗುರು ಕೂದಲ

ಎಳೆ ಎಳೆ ಬಿಡಿಸಿ

ಹುಡಿ ಮಾಡಿ

ನಯಗೊಳಿಸಬೇಕಿದೆ.

ಇನ್ನಾಮೇಲೆ ತಾನೇ

ಜಡೆ ಹೆಣಿಗೆ?

4

ಛೆ! ಕೊಂಚ ತಾಳಿಕೊಳ್ಳಿ

ಬೈರಾಗಿಯೇನೋ ಸರಿಯೇ ಸರಿ

ನಿಮ್ಮದೂ ವರಾತವೇ?

ಕಾಣುತ್ತಿಲ್ಲವೇ ನನ್ನ

ಸಮರ ತಯಾರಿ!

ಕೈ ಕಾಲು ಹರಿಯುತ್ತಲೇ ಇಲ್ಲ.

ಅಯ್ಯೋ ಹೊತ್ತು ಮೀರುತ್ತಿದೆಯಲ್ಲಾ.

5

ಅದೇನು ಶುಭಲಗ್ನವೋ

ಈಗ ನೀನೂ ಸುಮ್ಮನೆ ಕುಳಿತಿದ್ದೀಯ

ಹಠಮಾರಿ ಕೂದಲೂ ನೋಡು

ಮೆತ್ತಗಾಗಿ ಹೇಳಿದಂತೆ ಬಾಗಿ ಬಳುಕುತ್ತಿದೆ.

ಕೂದಲ ಜೊಂಪೆ ಇಷ್ಟಿಷ್ಟೇ ವಿಂಗಡಿಸಿ

ಒಂದು ಪಾದ, ಎರಡು ಪಾದs

ಮೂರು ಪಾದ, ನಾಲ್ಕನೆಯದು.......

ನೂರು ಇನ್ನೂರು

ಹ್ಹಾ..ಸಹಸ್ರವೋ ಮತ್ತೂ ಮೇಲೆಷ್ಟೋ.........

ಜಡೆ ಹೆಣೆಯುತ್ತಾ ಹೆಣೆಯುತ್ತಾ

ಎಚ್ಚರದಲಿ ಮುಳುಗಿ ಹೋಗಿದ್ದೇನೆ.

ಬೈರಾಗಿಗೇ ಮೈಮರೆವ ಜೊಂಪು!

ಯಾವ ಮಂಕುಬೂದಿಯೋ

ಇವರೋ ಮೂರ್ಚೆಹೋಗಿದ್ದಾರೆ

ಸೂರ್ಯ ಜ್ವಲಿಸುತ್ತಲೇ ಇದ್ದಾನೆ

ಹೊತ್ತಿಗೆ ಮುಳುಗುವುದೇ

ಮರೆತು ಹೋಗಿದೆ!

6

ಬೈರಾಗಿಗೆ

ಜಡೆ

ಹೆಣೆಯುತ್ತಲೇ

ಇದ್ದೇನೆ.......

__________________________________________________________________________________

ಬುದ್ಧ ಪಾದದ ಮೇಲೆ

ಹೆಜ್ಜೆ-1

ಅವನ ದೃಢ ವಿಶಾಲ

ಪಾದದ ಮೇಲೆ

ಪುಟ್ಟಾಣಿ ಹುಳು

ಅಂಗುಲಂಗುಲ ಏರಿ

ಪುಟ್ಟ ಪಾದವನೂರಿ

ಅತ್ತಿಂದಿತ್ತ ಜೀಕುತ್ತಾ ಜೋಕಾಲೆ.

ಅವನ ಪಾದದ ಮೇಲೆ

ಅದರ ಪದತಳ.

ಒಂದಿಂಚೋ ಎರಡಿಂಚೋ ಮೂರೋ

ತಗುಲದೇ ಬಿಟ್ಟೂ ಅಂಟುವ

ಆ ಪುಟಾಣಿ ಪಾದ

ಭೂಮಿಗಪ್ಪಿದ ಅವನ ಪಾದಕ್ಕೆ

ಖೋ ಕೊಟ್ಟೆಬ್ಬಿಸಿ

ಆತು ಹಿಡಿದ

ಚುಲ್ಟಾಣಿ ಹುಳುವಿನ ಪಾದ

ಹೆಜ್ಜೆಯೂರಲು ಉಳಿದ

ಕೊನೆಯ ಜಾಗ!

ಹೆಜ್ಜೆ-2

ಅವನ ದೃಢ ವಿಶಾಲ

ಪಾದದ ಮೇಲೆ

ಚಿಕ್ಕಾಣಿ ಚಿಕ್ಕ ಕೀಟ

ತನ್ನ ಅಂಗೈ ಇಟ್ಟು

ಒತ್ತುತ್ತಾ ಒತ್ತುತ್ತಾ

ಹೆಬ್ಬೆರಳು ಅದರ ಪಕ್ಕದ್ದು

ನಡುಕಿನದು, ಉಂಗುರದ್ದು, ಕಿರಿಯದು

ನೆಕ್ಕುತ್ತಾ ನೇವರಿಸುತ್ತಾ

ಆಟವೋ ಹುಡುಗಾಟವೋ....

ಹೆಜ್ಜೆ-3

ಅವನ ದೃಢ ವಿಶಾಲ

ಪಾದದ ಮೇಲೆ

ಬೊಟ್ಟಿನಗಲದ ಕ್ರಿಮಿಯೊಂದು ತಲೆಯೂರಿ

ತನ್ನ ತಲೆಗೂದಲಲೇ ಗುಡಿಸಿ ಒರೆಸಿ

ತಲೆಕೆಳಗೆ ಕಾಲು ಮೇಲೆತ್ತಿ ಶಿರ್ಷಾಸನ

ಪಾದದ ಮೇಲಿಂದ

ಬೆರಳ ತುದಿವರೆಗೆ

ಜೊಯ್ಯನೆ ಜಾರೋಬಂಡಿ

ಮತ್ತೆ ಮೊದಲಿಂದ

ಪಾದಕ್ಕೆ ತಲೆಯೂರಿ

ಉಲ್ಟಾಪಲ್ಟಾ ಸರ್ಕಸ್

ಆಟಕ್ಕೆ ಉಳಿದ ಏಕೈಕ ಮೈದಾನ!

ಹೆಜ್ಜೆ-4

ಅವನ ದೃಢ ವಿಶಾಲ

ಪಾದದ ಮೇಲೆ

ಬೆನ್ನುತಿಕ್ಕಿ ಹಗುರಾಗುವ

ಈ ಕ್ಷುದ್ರಜಂತು

ಅಂಗಾತ ಮಲಗಿ ಶವಾಸನ.

ಕ್ಷಣಕ್ಕೇ ತಿರುವು ಮುರುವಾಗಿ

ಹೊಟ್ಟೆ ಮೇಲೆ ದೇಕುತ್ತಾ

ಬೆರಳಿಂದ ಪಾದಬುಡಕ್ಕೆ

ಪಾದ ಮೂಲದಿಂದ

ಬೆರಳ ತುತ್ತತುದಿಗೆ ಉರುಳಾಟ

ಕೊಬ್ಬಿದ ದೇಹ ಸವೆತಕ್ಕೆ ಒದ್ದಾಟ!

ಹೆಜ್ಜೆ-5

ಕೊಟ್ಟಕೊನೆಯ ವಿಹಾರಧಾಮ!

____________________________________________________________________________________

ಕಸವೂ ನಕ್ಷತ್ರವೂ

1

ಬಯಲಿನಲಿ ಕೂತು

ಆಕಾಶಕ್ಕೆ ಕಣ್ಣು.

ಬೆಳ್ಳಂಬೆಳಗೇ ತಾರೆಗಳ ಹುಡುಕಿ

ಕಿತ್ತು ಪೋಣಿಸಿ

ಮಾಲೆ ಮಾಡುತ್ತ

ಮಡಿಲು ತುಂಬಿಕೊಳುವುದರಲೇ ಮಗ್ನ

ಈ ಬಯಲ ಬುದ್ಧ.

2

ಗುಡಿಸಿದ ರಾಶಿ ಬೀದಿ ಕಸ

ತನ್ನ ಪುಟ್ಟ ಬೊಗಸೆಗೆ ತುಂಬಿ

ದಿನವೂ ಪುಟ ಪುಟನೆ ಓಡಿ ಬಂದು

ಅವನ ಪಾದ ಬುಡಕ್ಕೆ ಸುರುವಿ

ತಾರೆಗಳ ಮಾಲೆ ಕಟ್ಟುತಾ

ಮೋಹಕ್ಕೆ ಬಿದ್ದವನ ಮೈತಡವಿ

ಎಬ್ಬಿಸಿ

ಇಹಕ್ಕೆ ಕಣ್ಬಿಡಿಸಿ

ಕಲ್ಲು ಹೂವು ಮುಳ್ಳು ಕಾಗದದ ಚೂರು.....

ಒಂದೊಂದೇ

ಅವಶೇಷ ಎತ್ತಿ ಹಿಡಿದು

ಪ್ರತಿ ಕಸದ ಇತಿಹಾಸ ವರ್ತಮಾನ

ಬಿಡಿ ಇಡಿಯಾಗಿ ಏರಿಳಿತದ ದನಿಯಲ್ಲೇ

ಕಥೆ ಬಿಡಿಸಿಡುತ್ತದೆ

ಈ ಬೀದಿ ಗುಡಿಸುವ ಜೀವ.

3

ಸಾಣೆಗೆ ಸಿಕ್ಕದ ಚೂಪುಗಲ್ಲು

ತುಳಿದು ಬಾಡಿಸಿದ ಹೂವು

ಚುಚ್ಚಲು ಕಾದಿರುವ ಮುಳ್ಳು

ಒಡೆದ ಬಳೆ ಚೂರು

ರಕ್ತದ ಕಲೆಯ ಬಟ್ಟೆ ಚಿಂದಿ

ಒಡೆದ ಭ್ರೂಣದ ಪಳೆಯುಳಿಕೆ.....

ಕಸದ ಮಣ್ಣಿನ ತುಂಬಾ ನೋವು.

ಅವನ ಪಾದಕ್ಕೆ ಕಸ ಸುರುವಿ

ಕಣ್ಣೀರಲೇ ಕೈ ತೊಳೆದರೂ

ಅವಳ ಪುಟ್ಟ ಬೊಗಸೆಯೊಂದು

ಸದಾ ಸುಡುವ ಕುಲುಮೆ.

4

ಅವನಿಗೆ ಕತೆ ಹೇಳುತ್ತಾ ಹೇಳುತ್ತಾ

ಕಸವಾಗಿಸಿದವರ ನಿರ್ದಯತೆಗೆ

ಕುದಿಯುತ್ತಾ ಸಿಡಿಯುತ್ತಾ

ಬಿಕ್ಕುತ್ತಾ ಉಮ್ಮಳಿಸಿ ಅಳುತ್ತಾಳೆ.

5

ಅವಳ ಮನ ನೇವರಿಸಿ ಸಂತೈಸುವ

ಬಯಲ ಬುದ್ಧ

ತಲೆನೇವರಿಸುತ್ತಾ

ಹೆಗಲ ಮೇಲಿನ ಚುಂಗಿನಲಿ

ಕಣ್ಣೀರೊರೆಸುತ್ತಾ

ಪ್ರತಿ ಕಸದ ಕಥೆಗೂ

ತಾನೇ ಅದಾಗಿ,

ಭವಿಷ್ಯ ನೂಲುತ್ತಾನೆ ಕರುಳ ನೂಲಿನಲಿ.

6

ಮುಟ್ಟುತ್ತಾ ಮುಟ್ಟುತ್ತಾ

ಕಸದ ಕಲ್ಲು ನಯವಾಗಿಸುತ್ತಾ

ಚೂಪು ಮುಳ್ಳಿನ ಮೊನೆ ಮುರಿಯುತ್ತಾ

ಬಳೆ ಚೂರು ಗುಂಡಗೆ ಅಂಟಿಸುತ್ತಾ.....

ಈ ಬಯಲ ಬುದ್ಧ

ಮುರಿದ ಹೂವಿನ ದಳಗಳ

ದೇಟಿಗೆ ಜೋಡಿಸುತ್ತಾ..... ಇರುತ್ತ.

7

ಇರುತ್ತಾ,

ಈ ಬೀದಿ ಗುಡಿಸುವ ಜೀವ

ಅವನ ಪಾದಕ್ಕೆ

ಕಸ ಸುರುವುತ್ತಾ

ಕತೆ ಹೇಳುತ್ತಾ

ಅವನ ತಾರೆಗಳ

ಮಡಿಲಿಗೆಳೆದುಕೊಂಡು

ತಾನೂ

ಮಾಲೆ ಕಟ್ಟುತ್ತಾಳೆ!

__________________________________________________________________________________

ಬೀಡಾಡಿ ಬುದ್ಧ

ಧ್ಯಾನವಿಲ್ಲ ತಪವಿಲ್ಲ

ಗಾಢನಿದ್ದೆಯಲಿ ಮೈಮರೆತವ

ಅಪ್ಪಿತಪ್ಪಿ ಪಕ್ಕಕ್ಕೆ ಹೊರಳಿ

ನೇರ ಈ ಮತ್ರ್ಯಲೋಕಕ್ಕೆ ಬಿದ್ದು

ನೆತ್ತಿಯೊಡೆದು ಬಾಯ್ಬಿಟ್ಟು

ಈ ನೆಲದಂತರಾಳಕ್ಕೂ

ಆ ಅನೂಹ್ಯ ಲೋಕಕ್ಕೂ

ನಡುವೆ ನಿಸ್ತಂತುವಿನೆಳೆ

*

ಆಯಾಸ ತುಂಬಿದ ನಿದ್ದೆಗಣ್ಣಿನಲ್ಲೇ

ಕರುಳಿನಾಳಕ್ಕಿಳಿದು ಆವರಿಸಿಬಿಡುವ

ಗಾರುಡಿಗ ನೋಟಕ್ಕೆ

ಸುತ್ತಲ ಚರಾಚರಗಳ ತಿಮಿರು

ಪಟಪಟನೆ ಉದುರಿ

ಅವನ ಪಾದಕಭ್ಯಂಜನ.

*

ಪಾದ ನೆಲಕ್ಕೂರಿ ಬೇರು ಬಿಟ್ಟು

ಮರವೇ ತಾನಾಗಿದ್ದು ಕಣ್ಕಟ್ಟು!

ಮೈತುಂಬಾ ಸುಮ್ಮನಾದರೂ

ಸಾವಿರಾರು ಹಕ್ಕಿಗೂಡು.

ಅಂಟಿಯೂ ಅಂಟಿಲ್ಲದ

ಹಗುರಾತಿ ಹಗುರ ನೂಲಿನೆಳೆಗಳ

ಮೇಲ್ಮೇಲಿನ ತೇಲಾಟದಲ್ಲೇ

ಥಟ್ಟನೆಲ್ಲರ ಕಣ್ಣು ತಪ್ಪಿಸಿ

ವ್ಯೋಮದಾಚೆಯ ನಂಟು.

*

ಲೋಕದ ಚೂರಿಯಿರಿತಕ್ಕೆ

ಕರುಳ ತುಂಬಾ ಗುನ್ನ.

ಗಾಯಗಳನು ಹೂಗಳಂತೆ ಕಿತ್ತು

ಬೊಗಸೆ ತುಂಬಾ ತುಂಬಿ

‘ಉಫ್’ ಎಂದು ಊದಿದ್ದಕ್ಕೆ

ಆಕಾಶದ ತಾರೆಗಳಾಗಿ ಹೋಗುವುದೇ?

*

ಒಣಗಿ ಬಿದ್ದ ಎಲೆಗಳ ಮೇಲೆ

ಊರಲೋ ಬೇಡವೋ ಎನ್ನುತ್ತಲೇ

ಭಾರವಿಲ್ಲದ ಹೆಜ್ಜೆ ಸೋಕಿಸಿದರೂ

ಸಣ್ಣ ಕಂಪನಕ್ಕೇ ನೊಂದು

ಮೆಲ್ಲಗೆ ಬಾಗಿ ಒಣಗಿದೆಲೆ ಎತ್ತಿ

ಎಲ್ಲಿ ಯಾವ ಮೂಲೆಯಲಿ

ಜೀವ ಒಂದಿಷ್ಟಾದರೂ ಮುದುಡಿ ಹೋಯಿತೋ.....

ಆತಂಕದ ಎದೆಬಡಿತ.

ಹೀಗೇ...ಹೀಗೇ....

____________________________________________________________________________________

ಮಹಾ ಪರಿನಿರ್ವಾಣ

1

ಕಾಂಡವೇ ಶಿಲೀಕೃತಗೊಂಡು

ಕಲ್ಲಾದ ಪಳೆಯುಳಿಕೆ, ಮರಗಲ್ಲಿನಲಿ

ಕೆತ್ತಿದ ಬುದ್ಧನಿಗೆ

ಅವಳಡುಗೆ ಮನೆಯೀಗ ತಪೋವನ.

ನೀಳ ಕಣ್ಣು ಮುಚ್ಚಿ

ಧ್ಯಾನಕ್ಕೆ ಕೂತ ಅವನೊಂದಿಗೆ

ಅವಳ ನಿತ್ಯ ಕಸುಬಿನಲ್ಲೇ

ಮೌನ ಜುಗಲ್‍ಬಂದಿ.

2

ಸೊಪ್ಪು ಸೋಸುತ್ತಾ

ಕಾಳು ಬಿಡಿಸುತ್ತಾ

ಪಾತ್ರೆ ತೊಳೆಯುತ್ತಾ

ಮಗುವಿಗೆ ಹಾಲೂಡಿ

ಲಾಲಿ ಹೇಳುತ್ತಾ

ಮರಗಲ್ಲ ಬುದ್ಧನನ್ನು ನೆಟ್ಟಿದ್ದಾಳೆ

ಹೆಣ್ಣ ಪ್ರತಿರೂಪದ ಮೃತ್ತಿಕೆಯಲಿ.

3

ಗಡಿಬಿಡಿಯಲಿ ಕೈಸುಟ್ಟು

ಬೆರಳು ಕೊಯ್ದು

ಜಾರಿ ಬಿದ್ದು

ನೋವು ಉಮ್ಮಳಿಸಿ

ಬಿಕ್ಕಳಿಸಿದ ಸದ್ದು.

ಒಂದಿಷ್ಟೇ ಕಣ್ತೆರೆದು ನೋಡಿ

ಥಟ್ಟನೆ ಮುಚ್ಚುವ ತಥಾಗತ!

ಅವಳ ನೋವಿಗೆ ಮಿಡುಕುವನೇ?

ತನ್ನ ಸಂಘಕ್ಕೇ ಹೆಣ್ಣ ನಿರಾಕರಿಸಿ

ಅವಳೊಡಲನೇ ಅಪಮಾನಿಸಿ

ಈ ಹಸಿಮಣ್ಣನೊದ್ದು ಮೇಲೇರಿದವನು?

4

ಆದರೀಗ...

ಈರುಳ್ಳಿ ಹೆಚ್ಚುವ ನೆವದಲಿ

ಒಳಗಿನ ಸಂಕಟಕ್ಕೇ ಬಾಯ್ಬಂದು

ದಳ ದಳ ಉದುರುವ ಅವಳ ಕಣ್ಣೀರಿಗೆ

ಈಗೀಗ ಅವನ ಕಣ್ಣಂಚಿನಲ್ಲೂ

ಕಂಡೂ ಕಾಣದಂತೆ ನೀರ ಪಸೆಯೇ?

5

ಒಲೆಯ ಕಾವಿಗೆ ಬಿಸಿಯಾಗಿ

ಕುಳಿರ್ಗಾಳಿಗೆ ತಂಪಾಗಿ

ಜೋಗುಳಕ್ಕೆ ನಿದ್ದೆಯಾಗಿ

ಪಾತ್ರೆ ಸಪ್ಪಳಕ್ಕೆ ಕಿವಿಯಾಗಿ

ಅಡುಗೆ ಘಮಕ್ಕೆ ವಾಸನೆಯಾಗಿ

ಅವಳ ತುಡುಮುಡಿಕೆಗೆ ಕಣ್ಣಾಗಿ

ಅರಳುತ್ತಿವೆ ಅವನೊಳಹೊರಗು

ಬುದ್ಧನೆನಿಸಿಕೊಂಡೂ ಮುಕ್ಕಾಗಿ

ಮಿಕ್ಕುಳಿದ ಸಾಕ್ಷಿಗಾಗಿ.

6

ಹೆಣ್ಣ ಮಿಡಿತದ ಮೃತ್ತಿಕೆಯಲಿ ನೆಟ್ಟ

ಮರಗಲ್ಲ ಬುದ್ಧನಿಗೀಗ

ನೆಲದಾಳದಲ್ಲೆಲ್ಲಾ ಬೇರು

ಕೈಕಾಲು ಎದೆ ತಲೆಗಳೆಲ್ಲ ಚಿಗುರು

ಕಣಕಣದ ಚಲನೆಗೂ ಮಿಡಿವ

ಹೆಣ್ಣ ನೋವಿಗೂ ತುಡಿವ

ಅವನೀಗ ಮತ್ರ್ಯಲೋಕದ ಕೂಸು!

[ಮರದ ಕಾಂಡ ಒಣಗಿ ಅನೇಕ ವರ್ಷಗಳ ಕಾಲ ಮಣ್ಣಿನೊಂದಿಗಿನ ಸಂಪರ್ಕದಿಂದ, ರಾಸಾಯನಿಕ ಕ್ರಿಯೆ ನಡೆದು ಖನಿಜವನ್ನು ಹೀರಿ ಮರದ ಕಾಂಡವೇ ಕಲ್ಲಾಗಿ ಪರಿವರ್ತನೆಯಾಗುವ ಸೃಷ್ಟಿ ವಿಶೇಷಕ್ಕೆ ಇಂಗ್ಲಿಷಿನಲ್ಲಿ ಠಿeಣಡಿiಜಿieಜ ತಿooಜ ಎನ್ನುತ್ತಾರೆ. ಅದಕ್ಕೆ ಸಂವಾದಿಯಾಗಿ ‘ಮರಗಲ್ಲು’ ಎಂದಿಲ್ಲಿ ಬಳಸಿದ್ದೇನೆ.]

_____________________________________________________________________________________

ಸಹಜ ಧ್ಯಾನ

ಹೂಕೋಸಿನ ರೂಪ ಬಣ್ಣದಲಿ

ಮನ ಲೀನ. ಮಲಿನ.

ಹೆಚ್ಚುತ್ತಾ ಮೆಚ್ಚುತ್ತಾ ಅದರ

ಬುಡದಲ್ಲೇ ಹರಿವ

ಪಿತಿಪಿತಿ ಹುಳು

ಕಂಡರೂ ಕಾಣದಂತೆ

ಚೆಲುವಿನಾರಾಧನಾ ಧ್ಯಾನ

ಪೀಠಸ್ಥ ಆದೇಶಕ್ಕೆ ಮಹಾಮೌನ.

ದಂಟು ಬೇಳೆ ಬೇಯಿಸಿ ಬಸಿದು

ಮೆಣಸು ಮಸಾಲೆ ಖಾರ

ಹದ ಬೆರೆಸಿ ಕುದಿಸಿ ಒಗ್ಗರಿಸಿ

ಬಸ್ಸಾರಿನ ರಸಗಂಧವ

ಆಘ್ರಾಣಿಸಿ ಹೀರಿ

ಕರುಳಿನಾಳದ ಬಾಯ್ಚಪ್ಪರಿಕೆ

ಮಹಾರಸದುನ್ಮಾದ ಧ್ಯಾನ

ಅಮಲಿನಲಿ ಮೈಮರೆವು

ಹೊರಳು ದಾರಿಯಲಿ ತಿಳಿವು.

ಬೆಳ್ಳುಳ್ಳಿ ಒಗ್ಗರಣೆ ಘಮ ಮೂಗಿಗಡರಿ

ಆ ಗಂಧದ ಬೆನ್ನು ಹಿಡಿದು

ಗಾಳಿಯಲೆಗಳ ಮೇಲೆ ಸವಾರಿ

ಬೀಸಿ ಕೆಡವುತ್ತದೆ ವಾಸನಾ ಧ್ಯಾನ

ತಪ್ಪುತ್ತದೆ ಪ್ರಭುತ್ವ ನಿರ್ದೇಶಿತ ದಾರಿ

ನಡೆದ ದಾರಿಯೇ ಸರಿ.

ಸಬ್ಬಸಿಗೆ ಸೊಪ್ಪಿನ

ವಿನ್ಯಾಸಕ್ಕೆ ಮೃದು ಸ್ಪರ್ಶಕ್ಕೆ

ಅದೆಂಥಾ ನವುರು ಮುದ.

ಮೃದುವಾಗಿ ಮುಟ್ಟುತ್ತಾ

ಆವರಿಸುವ ಆವಾಹಿಸುವ

ಹಿತವಾದ ಮಿಡಿತ

ಕಾಡುತ್ತದೆ ಅದೇ

ಸ್ಪರ್ಶಸುಖದ ಧ್ಯಾನ

ಅನುಭವಕ್ಕೇ ಬದ್ಧ ಮನ.

ಹೆಚ್ಚಲು ಕೈಗೆತ್ತಿಕೊಂಡ

ಈರುಳ್ಳಿಯ ಮೂಲ ಕಾಡಿ

ಪಕಳೆ ಪಕಳೆಗಳ ಬಿಡಿಸುತ್ತಾ ಹೋದಂತೆ

ಅದರಲ್ಲೇ ತಲ್ಲೀನ

ಆ ಕೌತುಕಕ್ಕೇ ಸೋತು

ಆವರಿಸುತ್ತದೆ ವಿಸ್ಮಿತ ಧ್ಯಾನ

ಅಳಿಸಿಹೋಗುತ್ತದೆ ಯಾರೋ ಬರೆದಿಟ್ಟ

ಅಲೌಕಿಕ ದಿವ್ಯ ಪುರಾಣ.

ಈ ನಿತ್ಯ ಪ್ರೀತಿಯ

ರೂಪ ರಸ ಗಂಧ ಸ್ಪರ್ಶ ವಿಸ್ಮಯಗಳ

ಮಾನುಷ ಸಹಜ ಧ್ಯಾನದಲಿ

ಅನುಕ್ಷಣದ ಎಚ್ಚರ

ಮತ್ತೆ ಮತ್ತ ಮೈಮರೆವಿನ

ಹುಚ್ಚು ಮೋಹದ ಜೂಟಾಟ.

ನಿಲುಕಲಾರದ ಎತ್ತರದಲೇ ಇರಲಿ ಬಿಡು

ಅವರಿಟ್ಟ ಸಂತ ಪೀಠ.

ನನಗಾಗಿ

ಈ ನೆಲದಲ್ಲೇ ಹೀಗೇ

ಈ ಕ್ಷಣ.

_____________________________________________________________________________________

ಕಲಾಕೃತಿಯೊಂದು

ಮುಚ್ಚಿಡುವುದಾಗದಿದ್ದಾಗ

ಬಿಕರಿಗಿಡಬಹುದಷ್ಟೆ ಬೀದಿಯಲ್ಲಿ

ಅಳೆದು ತೂಗಿ ಏರಿಳಿಯುವ ತಕ್ಕಡಿ

ಬೆಲೆಕಟ್ಟುತ್ತಾರೆ ಯಾರೋ

ಕೂಗುತ್ತಾರೆ ಹರಾಜು ಮತ್ತಿನ್ಯಾರೋ

ಪ್ರದರ್ಶನಕ್ಕಿಡುತ್ತಾರೆ

ಕಟ್ಟು ಹಾಕಿಸಿ ಮಗದೊಬ್ಬರು

ಕೈಯಿಂದ ಕೈಗಳ ದಾಟಿ

ಇದುವರೆಗೆ ಮುಚ್ಚಿಟ್ಟ

ದುಬಾರಿ ನಿಟ್ಟುಸಿರುಗಳು.

ಬೆನ್ನಿಗೆ ತಾಗಿದ ಗೋಡೆಗೆ

ಆತುಕೊಂಡ ಆ ನಿಟ್ಟುಸಿರುಗಳು

ಭಾರವಾಗುತ್ತದೆ ಮತ್ತಷ್ಟು

ಉಮ್ಮಳಿಸಿ ಅಳುತ್ತದೆ ಗೋಡೆ.

ಬಿಕ್ಕುವ ನಿಟ್ಟುಸಿರು

ನೇತು ಬಿದ್ದಿವೆಯೀಗ ಕಲಾಕೃತಿಗಳಾಗಿ!

***