ಸಹಭಾವ : ಎಚ್ ಎಸ್ ಶಿವಪ್ರಕಾಶ್ ರ “ನೊರೆಹಾಲು” ಕುರಿತು ಎರಡು ನೋಟಗಳು


ನಟ್ಟ ನಡು ರಾತ್ರಿಯಲಿ

ತಟ್ಟನೆ ಕಿರುಚುವ

ಪುಟ್ಟ ಕಂದಮ್ಮಾ ಅಳಬೇಡ

ಕೊಟ್ಟಿಗೆ ಕತ್ತಲಲಿ

ಕಟ್ಟಿಗೆ ಕೊರಡಂತೆ

ಕಟ್ಟಿಹಾಕಿರುವಂತ ಕರಿಗೋವು

ಹೊತ್ತು ಮೂಡುತ್ತಲೇ

ಕೊಟ್ಟೇ ಕೊಡುವೆವು ನಿನಗೆ

ಕೆಚ್ಚಲು ತುಂಬಾ ನೊರೆಹಾಲು

ನಟ್ಟ ನಡು ರಾತ್ರಿಯ

ಕತ್ತಲೆ ಕೊನೆಯಲ್ಲ

ಪುಟ್ಟ ಕಂದಮ್ಮಾ ಅಳಬೇಡ

**

ಇದು ಮಗುವಿಗೆ ಸಾಂತ್ವನ ಹೇಳುವ ಪರಿಯಲ್ಲಿ ಇರುವ ಕವನ. ಇದರೊಳಗೆ ಬರುವ “ಪುಟ್ಟ ಕಂದಮ್ಮ”, “ನಡು ರಾತ್ರಿ”, “ನೊರೆಹಾಲು” “ಹೊತ್ತು ಮೂಡುವದು” ಇವೆಲ್ಲ ಪರಿಚಿತ ಸಂಕೇತಗಳೇ ಆಗಿವೆ. ಹಾಗಾಗಿ, ಸಾಂತ್ವನದ ಹೊರತಾಗಿ ಕವನಕ್ಕಿರುವ ಸಾಂಕೇತಿಕ ಪದರಗಳ ಕಡೆ ಇವು ಬೊಟ್ಟು ಮಾಡುತ್ತವೆ. ಇಲ್ಲಿ ಕಾಣುವ ಸಾಂಕೇತಿಕತೆ ಮತ್ತು ಸಾಂತ್ವನ ಇವೆರಡೂ ಸಹ ಶಬ್ದಗಳಿಗಷ್ಟೇ ಸೀಮಿತವಾಗಿಲ್ಲ. ಈ ಕವನದ ಚೆಲುವೆಂದರೆ, ಇದರಲ್ಲಿ ಎಲ್ಲ ಸ್ತರಗಳಲ್ಲಿಯೂ ವಸ್ತು ಮತ್ತು ವಿನ್ಯಾಸಗಳ ಬಿರುಕಿರದ ಒಂದಾಣಿಕೆ. ಅಂದರೆ, ಕವನದ ಅರ್ಥ ಶಬ್ದಗಳಲ್ಲಿ ಮಾತ್ರವಲ್ಲದೇ, ಅದರ ಸ್ವರೂಪದಲ್ಲಿಯೂ ದನಿತವಾಗಿರುವದು.

ಕವನದಲ್ಲಿನ ಈ ಒಂದಾಣಿಕೆ ಅದರ ಹೆಚ್ಚುಗಾರಿಕೆ ಎಂದು ವಾದಿಸುವ ಪೂರ್ವ ನಾನು, ಈ ಕವನದ ಯಾವ ಅರ್ಥದ ಗ್ರಹಿಕೆಯ ಆಧಾರದ ಮೇಲೆ ಈ ಮಾತುಗಳನ್ನು ಹೇಳುತ್ತಿದ್ದೇನೆ ಎಂದು ಸ್ಪಷ್ಟಪಡಿಸುವುದು ಒಳಿತು. ಆಶಾವಾದವನ್ನು ಸೂಚಿಸುವ “ನೊರೆಹಾಲು” ಕವನದಲ್ಲಿ ಅಳುತ್ತಿರುವ ಮಗುವಿಗೆ ಸಾಂತ್ವನ ಹೇಳುತ್ತಿರುವ ದನಿ ಇದೆ. ಇದು ತಾಯ್ದನಿಯಾದರೂ, ಹೆಣ್ಣಿನ ದನಿಯೇ ಆಗಬೇಕಾಗಿಸುವುದಿಲ್ಲ ಕವನದ ವ್ಯಾಕರಣ. ಒಟ್ಟಾರೆ, ಇರುವ ಕರಾಳ ಪಾಡಿನ ಸಂಧರ್ಭದಲ್ಲಿ ಬರಲಿರುವ ಸುಸ್ಥಿತಿಯ ಆಶ್ವಾಸನೆಯನೀವ ಕವನವಿದು. ಅಂದರೆ, ಬರಲಿರುವ ಬದಲಾವಣೆಯ ಸೂಚನೆ. ಈ ಅರ್ಥ ಕವನದ ಶಬ್ದಗಳಲ್ಲಿ ಸರಳೀತವಾಗಿ (ಸರಳ +ಸುರಳೀತ) ಕಾಣುತ್ತದೆ. ಆದರೆ, ಕವನ ನಮ್ಮೊಳಗೆ ಇಳಿಯಲು ಈ ಸರಳೀತತೆ ಮಾತ್ರ ಕಾರಣವಾಗಿಲ್ಲ. ಯಾಕೆಂದರೆ, ಸಾಮಾನ್ಯವಾಗಿ ಕವನ ವಾಚ್ಯವಾದಾಗ, ಅದರ ತಿರುಳು ಸುಲಭ ಗ್ರಾಹ್ಯವಾದಾಗ, ಓದುಗನಲ್ಲಿ ಅತೃಪ್ತಿ ತಲೆದೋರುತ್ತದೆ. ಒಳ್ಳೆಯ ವಿಷಯವನ್ನು ನೇರ ಹೇಳಿಬಿಟ್ಟರೆ ಕಾವ್ಯ ಆಗುವುದಿಲ್ಲವೆನ್ನುವ ಕಟು ಸತ್ಯ ಕವನ ಬರೆದವರಿಗೆಲ್ಲ ಗೊತ್ತಿರುವ ಸಂಗತಿ. ಹಾಗಾಗಿಯೇ, “ನೊರೆಹಾಲು” ಕವನದ ಪದಗಳಲ್ಲಿ ದನಿಸಿರುವ ಆಶಾವಾದ ಮಾತ್ರ ನಮ್ಮನ್ನು ಸೆಳೆವ ಅಂಶವಾಗಿಲ್ಲ.

ಹಾಗಾದರೆ, ಈ ಕವನದಲ್ಲಿನ ಒಳಸೆಳವು ಎಲ್ಲಿದೆ? ಕವನದ ಲಯದಲ್ಲಿದೆಯೇ? ಈ ಕವನಕ್ಕೆ ಅರ್ಥಕ್ಕೊಗ್ಗುವ ಲಯವಿದೆ. ಅಂದರೆ, ಕವನದ ಸಂಧರ್ಭ ಮಗುವಿಗೆ ಹೇಳುವ ಸಾಂತ್ವನವಾಗಿರುವಾಗ, ತಕ್ಕಂತೆಯೇ ಮಕ್ಕಳ ಪದ್ಯದ ಲಯದಲ್ಲಿಯೇ ಇದೆ. ಇದರಲ್ಲಿ ಇರುವ ದ್ವಿತೀಯಾಕ್ಷರ ಪ್ರಾಸ ಮತ್ತು ಮೂರು ಶಬ್ದಗಳ ಸಾಲು ಒಂದು ಸರಳ ಲಯವನ್ನು ಕಟ್ಟುತ್ತವೆ. ಆದರೆ, ಇಂಥಹ ಸರಳ ಲಯಗಳು ಮಕ್ಕಳ ಪದ್ಯಗಳಲ್ಲಿ ಸಾಮಾನ್ಯವಾಗಿರುವಾಗ, ತನ್ಮೂಲಕವೇ ಈ ಕವನ ನಮ್ಮನ್ನು ಸೆಳೆಯುತ್ತದೆ ಎನ್ನುವುದು ಕಷ್ಟ. ಹಾಗಾಗಿಯೇ, “ನೊರೆಹಾಲು” ಕವನದ ಲಯ ಮಾತ್ರ ನಮ್ಮನ್ನು ಸೆಳೆವ ಅಂಶವಾಗಿಲ್ಲ.

ಅಂತೆಯೇ, ಈ ಕವನದ ಸಾಂಕೇತಿಕತೆ. ಕಾವ್ಯದೊಳಗಿನ ಸಾಂಕೇತಿಕತೆ ನಮ್ಮ ಆಸಕ್ತಿ ಕೆರಳಿಸಿ, ನಮ್ಮನ್ನು ಹುಡುಕಾಟಕ್ಕೆ ಹಚ್ಚಿ, ಉತ್ತರ ಕಂಡಾಗ ನಮ್ಮನ್ನು ಹಿಗ್ಗಿನಲ್ಲಿ ತೇಲಾಡುವಂತೆ ಮಾಡುವ ಅನುಭವ ನಮಗೆಲ್ಲ ಇದ್ದದ್ದೇ. ಯಶವಂತ ಚಿತ್ತಾಲರ “ಆಟ”, ಅಡಿಗರ “ಭೂತ”, ರಾಮಚಂದ್ರ ಶರ್ಮರ “ಏಳು ಸುತ್ತಿನ ಕೋಟೆ” ಇವೆಲ್ಲ ಕೃತಿಗಳು ನಮ್ಮನ್ನು ಸೆಳೆಯುವುದೇ ಅವುಗಳ ಸಾಂಕೇತಿಕತೆ ಕ್ಲಿಕ್ ಆದಾಗ. ಈ ಕವನದಲ್ಲಿನ ಸಂಕೇತಗಳನ್ನು ಗಮನಿಸಿದರೆ ಅವು ನಮ್ಮನ್ನು ಹೆಚ್ಚು ಅಟ್ಟಾಡಿಸುವಂತವುಗಳಲ್ಲ. ಮಕ್ಕಳ ಪದಕ್ಕೆ ಸರಿಹೊಂದುವಂತೆ ಇದರೊಳಗಣ ಸಂಕೇತಗಳೂ ಸಹ ಸರಳವಾಗಿವೆ, ಸುಲಭಗ್ರಾಹ್ಯವಾಗಿವೆ. ಹಾಗಾಗಿಯೇ, “ನೊರೆಹಾಲು” ಕವನದ ಸಾಂಕೇತಿಕತೆಮಾತ್ರ ನಮ್ಮನ್ನು ಸೆಳೆವ ಅಂಶವಾಗಿಲ್ಲ.

ಹೀಗೆ ಹುಡುಕುತ್ತ ಸಾಗಿದಂತೆ ಹೊಳೆಯುವ ಪ್ರಶ್ನೆಯೆಂದರೆ: ಹಾಗಾದರೆ ಈ ಕವನದಲ್ಲಿನ ನಮ್ಮನ್ನು ಒಳಸೆಳೆವ ಅಂಶವಾದರೂ ಏನು? ನೋಡೋಣ.

ಮೊದಲ ಚರಣದಲ್ಲಿ ಬರುವ ಪ್ರಾಸಪದಗಳ: “ನಟ್ಟ”, “ತಟ್ಟನೆ” “ಪುಟ್ಟ”. ಎರಡನೆಯ ಚರಣದಲ್ಲಿ ಇದೇ ಪ್ರಾಸ ಅಂದರೆ ದ್ವಿತೀಯಾಕ್ಷರದಲ್ಲಿ “ಟ್ಟ” ಮುಂದುವರಿಯುವ ಮೂಲಕ ಕವನ ತನ್ನ ವಿನ್ಯಾಸದಲ್ಲಿ ಪ್ರಸ್ತುತ ಸ್ಥಿತಿ(ಪ್ರಸ್ಥಿತಿ)ಯನ್ನು ನೆಲೆಗೊಳಿಸುತ್ತದೆ. ಹಾಗಾಗಿಯೇ, ಈ ಚರಣಗಳಲ್ಲಿ ಇರುವ ಸ್ಥಿತಿಯ ವರ್ನನೆಗಳಿವೆ: ನಡುರಾತ್ರಿ, ಅಳುವ ಮಗು, ಕರಿಗೋವು, (ಅದೂ ಸಹ ಸಧ್ಯಕ್ಕೆ, ಅಂದರೆ ನಡುರಾತ್ರಿಯಲ್ಲಿ ಕಟ್ಟಿಗೆ ಕೊರಡಂತೆ ಇದೆ, ಹಾಲು ಈ ಹೊತ್ತಲ್ಲಿ ಸಿಗಲಾರದು). ಹೀಗೆ ಪ್ರಸ್ಥಿತಿ (ಪ್ರಸ್ತುತ ಸ್ಥಿತಿ)ಯನ್ನು ನೆಲೆಗೊಳಿಸಿದ ನಂತರ ಮೂರನೆಯ ಚರಣದಲ್ಲಿ ಕವನ, ಬರಲಿರುವ ಬದಲಾವಣೆಯ ಕಡೆ ಅಂದರೆ, ಮೂಡಲಿರುವ ಬೆಳಗಿನ ಕಡೆ, ಹೊರಳುತ್ತದೆ. ಅದು ಹೀಗೆ ಮಾಡುವಾಗ, ಕವನದ ಪ್ರಾಸವೂ ಸಹ “ಹೊರಳುತ್ತದೆ”, ಬದಲಾಗುತ್ತದೆ. ಅಂದರೆ, ನಮ್ಮ ಮನಸ್ಸಿನಲ್ಲಿ ಮಾತ್ರವಲ್ಲ, ಕವನವನ್ನು ಓದುತ್ತಿರುವ ನಮ್ಮ ನಾಲಿಗೆಯ – ದೇಹದ – ಸ್ತರದಲ್ಲಿಯೂ ಸಹ ಬರಲಿರುವ ಬದಲಾವಣೆಯ ಅನುಭವ ವೇದ್ಯವಾಗುತ್ತದೆ. ಇದು ಕವಿಸಮಯವಲ್ಲ, ಹಾಗಾಗಿಯೇ ಮುರನೆಯ ಚರಣದಲ್ಲಿ “ಟ್ಟ” ಒಂದು ಸಾರಿ ಬರುತ್ತದೆ, ಉಳಿದೆರಡು “ತ್ತ” ಮತ್ತು “ಚ್ಚ” ಆಗಿವೆ. ಆದರೆ, ಈ ಚರಣದಲ್ಲಿ ಲಯದೋಷವಾಗದಂತೇ ಹತ್ತಿರದ ಒತ್ತಕ್ಷರಗಳನ್ನು ಬಳಸಲಾಗಿದೆ. ಅಂದರೆ, ಪ್ರಾಸದ ಭಾಸ ಹಗುರವಾಗಿ ನಮಗಾಗುತ್ತದೆ. ಬದಲಾವಣೆ ನಮ್ಮೊಳಗೇ ಆಗಿದೆ – ನಮ್ಮ ನಾಲಿಗೆಯ ಸ್ತರದಲ್ಲಿಯೇ ಈ ಬದಲಾವಣೆ ನಮಗೆ ಭಾಸವಾಗುತ್ತದೆ. ಆದರೂ, ಇದು ಎಷ್ಟು ಸಹಜ ಬದಲಾವಣೆ ಎಂದರೆ, ದೇಹಕ್ಕೆ ವೇದ್ಯವಾದದ್ದು ಮನಸ್ಸಿಗೆ ತಲುಪಲು ಸ್ವಲ್ಪ ಸಮಯ ಹಡಿಯುತ್ತದೆ. ಕೊನೆಯ ಚರಣವೂ ಸಹ, ಮೂಲ ಸ್ಥಿತಿ, ಅಂದರೆ “ಟ್ಟ” ಪ್ರಾಸದ ಸ್ಥಿತಿಗೆ ಮರಳದೇ, ಬದಲಾದ ಸ್ಥಿತಿ – ಬೆಳಗಾಗಿರುವ ಸ್ಥಿತಿ ಯನ್ನು ಸೂಚಿಸುವ ಅನ್ಯಪ್ರಾಸವನ್ನು ಉಳಿಸಿಕೊಂಡಿದೆ.

ಹೀಗೆ, “ನೊರೆಹಾಲು” ಕವನದಲ್ಲಿ, ಪ್ರಾಸದ ಏರ್ಪಾಡಿನ ಮೂಲಕ ಕವನದ ಅರ್ಥವನ್ನು ಪ್ರತಿಫಲಿಸಲಾಗಿದೆ. ಹಾಗಾಗಿಯೇ, ಈ ಕವನದ ಅರ್ಥಸೂಚನೆಯಲ್ಲಿ ಶಬ್ದ, ಪ್ರಾಸ ಮತ್ತು ಸಂಕೇತಗಳ ಸ್ತರಗಳಲ್ಲಿ ಒಂದಾಣಿಕೆಯಿದೆ. ನಮ್ಮನ್ನು ಸೆಳೆವ ಒಳಾಂಶವೆಂದರೆ ಇದೇ ಒಂದಾಣಿಕೆಯಾಗಿದೆ.

ಕಮಲಾಕರ ಕಡವೆ

**

ನಿಜವಾಗಿಯೂ ಶಿವಪ್ರಕಾಶರ ಕವನದ ಹೆಚ್ಚುಗಾರಿಕೆ ಅದರ ರಚನೆಯೊಳಗೆ ಒಳನುಡಿಯುತ್ತಿರುವ ಸಾಂತ್ವನದಲ್ಲಿದೆ. ಆ ಸಾಂತ್ವನದ ಮಾತು ಎಲ್ಲಿಯೂ ರಮಿಸುವ ಶೈಲಿಯಲ್ಲಿ ಇಲ್ಲ. ಕವನ ಅಳುತ್ತಿರುವ ಕಂದನನ್ನು ಕಂಕುಳಲ್ಲಿ ಎತ್ತಿ ಕಣ್ಣೊರೆಸುವ ಹಾಗಿರದೆ ದುಃಖದ ನಟ್ಟನಡುವೊಮ್ಮೆ ಅಂತರಂಗದ ಮಡಿಕೆಗಳಲ್ಲಿ ಮೂಡಿಬರುವ ಅರಿವಿನ ಹಾಗೆ, ಫಳಾರನೆ ಬಂದು ಹೋಗುವ ಅಂತರ್ಧ್ವನಿಯ ಸೆಳಕಿನ ಹಾಗಿದೆ. ಕವನ ಸೂಸುತ್ತಿರುವ ಸಾಂತ್ವನದ ಮೆಲ್ಲುಸಿರು ಎಷ್ಟು ಹಿತವಾಗಿದೆಯೋ ಹಾಗೆಯೆ ಅದು ಸೂಚಿಸುತ್ತಿರುವ ರುದ್ರಸತ್ಯವೂ ಅಷ್ಟೇ ಬಿರುಸಾಗಿದೆ. ಹಾಗಾಗಿಯೋ ಏನೋ ಕವನದಲ್ಲಿ ಕಟ್ಟಿಗೆ ಕೊರಡಿನಂತೆ ಇರುವ ಕರಿಗೋವು ಅದರ ಜಡತೆ, ನಿಷ್ಕ್ರಿಯತೆ ಹಾಗೂ ತಟಸ್ಥ ಗುಣಗಳನ್ನು ನಮಗೆ ತೋರುತ್ತಿದೆ. ಅಷ್ಟೇ ಅಲ್ಲ ಹೊತ್ತು ಮೂಡುತ್ತಲೇ ನಚ್ಚನೆಯ ನೊರೆಹಾಲು ಸಿಗುವುದು ಎಂಬ ಭರವಸೆ ಎಷ್ಟು ಗಟ್ಟಿಯಾಗಿದೆಯೋ ಅಷ್ಟೇ ಕಟುವಾಗಿರುವುದು ಕಟ್ಟಿಗೆಯ ಕೊರಡಿನಂತೆ ಇರುವ ವಾಸ್ತವ, ವಿಧಿ, ಭವಿಷ್ಯ. ಅದು ಏನೇ ಆಗಿರಲಿ ಇದ್ದದ್ದು ಇದ್ದಂತೆಯೇ ಬಿದ್ದಿರುತ್ತದೆ ಎಂಬುದಂತೂ ನಿಜವೇ ಎಂಬುದನ್ನು ಕವಿತೆ ತನ್ನ ನಿರ್ಲಿಪ್ತ ಧಾಟಿಯಲ್ಲಿ ನಿರೂಪಿಸುತ್ತಿದೆ.

ಇದನ್ನು ಮೀರಿದಂತೆ, ಕೊನೆಯಲ್ಲಿ ಬರುವ ಕೆಚ್ಚಲು ತುಂಬಾ ನೊರೆಹಾಲು ಕವನ ತುಂಬಿಕೊಟ್ಟಿರುವ ನಿರಾಶೆಯ ಭಾವವನ್ನು ತೊಡೆಯಲು ಸಹಾಯಕವಾಗಿದೆ ಎಂಬುದೇನೋ ಸರಿ. ಆದರೆ ಅದನ್ನು ಹೇಳಿರುವ ಅವರ್ತಿತ ಶೈಲಿಯಲ್ಲೇ ಒಂದು ಬಗೆಯ ಸ್ಥಿತಪ್ರಜ್ಞತೆಯ ನೋಟ ಇದೆ. ಅದಕ್ಕಾಗೇ ಕವನ ಸೂಚಿಸುವ ಹತಾಶೆ ಹಾಗೂ ಆಶಾವಾದ ಎರಡನ್ನೂ ಚುಟುಕಾಗಿ ಹೇಳಿ ಮುಂದೆ ನಡೆದಂತಿದೆ. ಸಾಂತ್ವನ ನುಡಿಯುತ್ತಿರುವ ದನಿ ಕೇವಲ ಹೆಣ್ಣಿನದು ಇಲ್ಲವೇ ತಾಯಿಯದು ಎಂಬ ತೀರ್ಮಾನಕ್ಕೆ ಬಂದುಬಿಟ್ಟರೆ ಕವಿತೆಯೊಳಗೆ ತೂಗುತ್ತಿರುವ ಸಮತೂಕದ ನಿಲುವನ್ನು ಅರಿಯಲು ಕಷ್ಟವಾಗಬಹುದು. ನಿರೂಪಕನಿಗೆ ಒಂದು ನಿರ್ದಿಷ್ಟ ರೂಪ ಇಲ್ಲದಿರುವುದು ಕವಿತೆಯ ಶಕ್ತಿಯನ್ನು ಹೆಚ್ಚುಮಾಡಿದೆ. ಮುಗ್ಧ ಆಶಾವಾದ,ಕೇವಲ ಕರಾಳವಾಸ್ತವದ ಕಹಿ, ಎರಡನ್ನೂ ದಾಟಿದ ದಾರಿಯ ಕಡೆ ನೋಡುವಂತೆ ಕಾಣುವುದರಿಂದ ಕವನ ಆಸಕ್ತಿಯನ್ನು ಹುಟ್ಟಿಸುವಂತಿದೆ. ಮುಖ್ಯವಾಗಿ ಕವನ ತನ್ನ ವಸ್ತು,ವಿನ್ಯಾಸ, ಆಶಯ ಹಾಗೂ ಜೀವನ ದೃಷ್ಟಿಗಳನ್ನು ಯಾವ ಹೆಚ್ಚುಗಾರಿಕೆಯಿಲ್ಲದೆ ಅಪರೂಪದ ಒಂದುಗಾಣಿಕೆಯಲ್ಲಿ ಹೆಣೆದಿರುವುದು ವಿಶೇಷವಾಗಿದೆ.

-ಎಸ್. ಸಿರಾಜ್ ಅಹಮದ್

##